ರೊಟ್ಟಿ ಕಲ್ಲಿನಲ್ಲಿ ಗುಳ್ಳೆ ನರಿಯ ಶಿಕಾರಿ

FamilyDramaShort-Stories
Aug 05, 2026
Listen to storyNarrated by VITI
LightDark
0:00 / 0:00
Read this story in
Kannada

ದನಗಳನ್ನು ಗದ್ದೆಯಲ್ಲಿ ಕಟ್ಟಿ ಬೊಮ್ಮನಕೆರೆಯ ಸಂತೆಗೆ ಹೋಗುವಷ್ಟರಲ್ಲಿ ಆಕಾಶವೆಲ್ಲಾ ಕರಿ ಮೋಡಗಳಿಂದ ಕೂಡಿತ್ತು. ಮನೆಗೆ ಸೇರೋ ಹೊತ್ತಿಗೆ ಭಾರಿ ಮಳೆ ಬರ್ತದೆ ಅಂತ ಕಾಣ್ಸದೆ… ಬೇಸಿಗೆ ಮೊದಲು ಮಳೆ ಬೇರೆ. ಇದೇ ಖುಷಿಗೆ ಮೀನ್ ತಗಂದಿದ್ರೆ ಆಗದು” ಎನ್ನುತ್ತಾ ಸುಬ್ಬೇಗೌಡರು ಮೀನಿನ ಅಂಗಡಿಯ ಬಳಿ ನಡೆದರು. ಮೀನಿನ ಅಂಗಡಿಯ ಮುಂದೆ ಹೋಗಿ ನಿಂತರೆ ಅಲ್ಲಿ ಕೊರೆ ಮೀನು, ಹಾವು ಮೀನು ಬಿಟ್ಟು ಬೇರೆ ಯಾವ ಮೀನು ಕಾಣಲೇ ಇಲ್ಲ. ಹೆಂಗು ಅರ್ಧ ದಾರಿ ಬಂದಾಗಿದೆ, ಅತ್ತಲಗೆ ಜನ್ನಾಪುರಕ್ಕೆ ಹೋಗಿ ಮೀನ್ ತಗಬರ್ತೀನಿ ಎನ್ನುತ್ತಾ ಸುಬ್ಬೇಗೌಡರು ಜನ್ನಾಪುರಕ್ಕೆ ಹೊರಟಿದ್ದ ‘ಮಣಿಕಂಠ’ ಎಂದು ಹೆಸರಿದ್ದ ಜೀಪನ್ನು ಹತ್ತಿದರು.

ಜೀಪು ಹೊರಟಿತು. ಹಾಗೆಯೇ ಒಂದೊಂದೇ ಮಳೆ ಹನಿಗಳು ಆಕಾಶದಿಂದ ಬೀಳತೊಡಗಿದವು. ಜೀಪಿನ ಹಿಂದಿನ ಸೀಟಿನ ಕಿಟಕಿ ತೆರೆದದ್ದು ಯಾರು ಗಮನಿಸಿಯೇ ಇರಲಿಲ್ಲ. ಹಿಂದಿನ ಸೀಟಿನಲ್ಲಿದ್ದ ವಸ್ತುಗಳೊಂದಿಗೆ ಸುಬ್ಬೇಗೌಡರ ಕಾಫಿ ಪುಡಿಯ ಚೀಲವೂ ಒದ್ದೆಯಾಗಿ ಹೋಗಿತ್ತು.

ಮುಕ್ಕಾಲು ಗಂಟೆ ಪ್ರಯಾಣದ ನಂತರ ಜನ್ನಾಪುರ ಸರ್ಕಲಿನಲ್ಲಿ ಜೀಪು ನಿಂತಿತು. ಜೀಪಿನವನಿಗೆ ಮೂವತ್ತು ರೂಪಾಯಿ ಕೊಟ್ಟು ಸಂತೆ ಬೀದಿಯೆಡೆಗೆ ಗೌಡರು ಹೆಜ್ಜೆ ಹಾಕಿದರು.

ಜನ್ನಾಪುರವು ಬೇರೆ ಊರುಗಳಿಗೆ ಹೋಲಿಸಿದರೆ ಬಹಳಾ ಬೆಳವಣಿಗೆ ಹೊಂದಿದ್ದ ಊರಾಗಿತ್ತು. ಕಾಫಿ ಬೆಳೆಗಾರರ ಅಧಿಪತ್ಯ ಹೊಂದಿದ್ದ ಊರೆಂದರೂ ತಪ್ಪಿಲ್ಲ.

ಬೈರ್ಮುಡಿ, ಬೆಟ್ಟದಮನೆ, ಬೊಮ್ಮನಕೆರೆ, ದೇವಲ್ದಕೆರೆ, ಹೊಸಳ್ಳಿ, ಬೈರಾಪುರ ಇನ್ನೂ ಮುಂತಾದ ಊರುಗಳಿಗೆ ಹಿರಿಯಕ್ಕನಂತಿರುವ ಊರೆಂದರೆ ಜನ್ನಾಪುರ. ಮೂಡಿಗೆರೆ ಬಿಟ್ಟರೆ ಇಲ್ಲಿಯೇ ಒಳ್ಳೆ ಶಾಲೆಗಳು ಇದ್ದದ್ದು. ಬಹುತೇಕ ಕಾಫಿ ಬೆಳೆಗಾರರ ಮಕ್ಕಳು ಜನ್ನಾಪುರದ ‘ಇಂಡಿಯನ್ ಕಾನ್ವೆಂಟ್’ನಲ್ಲಿ ಓದುತ್ತಿದ್ದವು. ಸುಬ್ಬೇಗೌಡರ ಮೊಮ್ಮಗ, ಅಂದರೆ ಅವರ ಹಿರಿ ಮಗಳಾದ ವೈಶಾಲಿಯ ಮಗ ‘ಸೋಮಶೇಖರ’ ಅಲ್ಲಿಯೇ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಸಂಜೆ ಮೂರು ಐವತ್ತಕ್ಕೆ ಶಾಲೆ ಮುಗಿಯುವುದು. ಆತನು ಒಂದು ದೊಡ್ಡ ರಸ್ತೆ ದಾಟಿ ಹೊಸಳ್ಳಿ ಕಡೆ ಹೋಗುವ ಯಾವುದಾದರೊಂದು ಜೀಪು ಹತ್ತಿ ಮನೆ ಸೇರಬೇಕಿತ್ತು.

ಎಂದಿನಂತೆ ಶಾಲೆ ಬಿಟ್ಟಮೇಲೆ ಸೋಮಶೇಖರ ಜೀಪುಗಳು ನಿಲ್ಲುವ ಜಾಗದ ಬಳಿ ಹೋಗುತ್ತಿದ್ದ. ಅದೇ ಸಮಯದಲ್ಲಿ ರಸ್ತೆ ಬದಿಯಲ್ಲಿ ಮೀನು ಕೊಳ್ಳುತ್ತಾ ನಿಂತಿದ್ದ ತನ್ನ ಅಜ್ಜನನ್ನು ನೋಡಿದ. ಅಜ್ಜಾ, ಅಜ್ಜಾ ಎಂದು ಕೂಗುತ್ತಾ ಅಜ್ಜನ ಬಳಿ ಹೋಗಿ ಅಜ್ಜನನ್ನು ತಬ್ಬಿ ಹಿಡಿದ. ಸುಬ್ಬೇಗೌಡರು ಸೋಮಶೇಖರನನ್ನು ಪ್ರೀತಿಯಿಂದ ಸೋಮು ಎಂದು ಕರೆಯುತ್ತಿದ್ದರು.

ಪುಟ್ಟ ಕೈಗಳಲ್ಲಿದ್ದ ಸ್ಕೂಲ್ ಬ್ಯಾಗ್ ಮತ್ತು ಊಟದ ಬ್ಯಾಗ್‌ನ್ನು ಪಕ್ಕಕ್ಕೆ ಇರಿಸಿ ಪುಟ್ಟ ಮೊಮ್ಮಗನನ್ನು ಎತ್ತಿ ಮುದ್ದಾಡಿದರು. ವೈಶಾಲಿ ಪ್ರತಿ ಬಾರಿ ಸುಗ್ಗಿ ಹಬ್ಬಕ್ಕೆ ಸೋಮನನ್ನು ಅಜ್ಜನ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು. ಆದರೆ ಸುಗ್ಗಿ ಹಬ್ಬದ ಸಮಯದಲ್ಲಿ ಅವರ ಕುಟುಂಬದ ಚೌಡಿ ಹಬ್ಬ ಇದ್ದಿದ್ದರಿಂದ ಅಜ್ಜನ ಮನೆಗೆ ಸೋಮು ಹೋಗಿ ಒಂದು ವರ್ಷವಾಗಿತ್ತು.

ಸೋಮುವಿನ ಕೈ ಹಿಡಿದು ಗೌಡರು ಅಲಂಕಾರ ಹೋಟಲಿಗೆ ನಡೆದರು. ಪುಟ್ಟ ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಎರಡು ಗೋಲಿಬಜೆ ತಿನ್ನಿಸಿದರು. ಅದೇ ಹೋಟಲಿಗೆ ಕಾಫಿ ಕುಡಿಯಲು ಬಂದಿದ್ದ ಜೀಪ್ ಡ್ರೈವರ್ ಇವರತ್ತ ಬಂದು, “ಗೌಡ್ರೆ, ನಿಮ್ ಕಾಫಿ ಪುಡಿ ಚೀಲ ಜೀಪಲ್ಲೇ ಬಾಕಿ ಆಗಿದೆ. ತಗಬರ್ತೀನಿ ಇರಿ,” ಎನ್ನುತ್ತಾ ಜೀಪಿನ ಬಳಿಗೆ ಓಡಿದ.

“ಜೀಪು ಹೊಸಳ್ಳಿ ಕಡೆಗೆ ಹೋಗುತ್ತಾ?” ಎನ್ನುತ್ತಾ ಗೌಡರು ಹಿಂದೆಯೇ ಹೋದರು. “ಕತ್ತಲೆ ಆಗ್ತಾ ಬಂತು, ಮಗು ಬೇರೆ ಜೊತೆಗೆ ಇದೆ. ಅತ್ತಲಗೆ ಮಗಳ ಮನೆಗೆ ಹೋಗಿ ಇವತ್ತು ಅಲ್ಲೇ ಉಳಿದು ನಾಳೆ ಊರಿಗೆ ಹೋಗ್ತೀನಿ,” ಎಂದರು.

“ಹೊಸಳ್ಳಿಗೆ ಹೋಗ್ತೀನಿ, ಬೇಗ ಜೀಪ್ ಹತ್ತಿ,” ಎನ್ನುತ್ತಾ ಡ್ರೈವರ್ ಜೀಪ್ ಸ್ಟಾರ್ಟ್ ಮಾಡಿದ.

ಹೊಸಳ್ಳಿ ತಲುಪುವ ಹೊತ್ತಿಗೆ ಸೋಮು ಅಜ್ಜನ ತೊಡೆಯ ಮೇಲೆ ಹಾಯಾಗಿ ಮಲಗಿ ನಿದ್ರಿಸುತ್ತಿದ್ದ. ಮಲಗಿದ್ದ ಮಗುವನ್ನು ಹೆಗಲ ಮೇಲೆ ಮಲಗಿಸಿಕೊಂಡು ನಿಧಾನಕ್ಕೆ ಗೌಡರು ಮಗಳ ಮನೆಯತ್ತ ನಡೆದರು. ಬಿದಿರಿನ ದ್ವಾರವನ್ನು ತೆಗೆದು ಒಳನಡೆದರು. ಅವರ ಮನೆಯಂಗಳದ ಬಳಿ ಹೋದಾಗ ಮನೆಯ ಮುದ್ದಿನ ನಾಯಿಮರಿ ‘ಬಿಳಿಯ’ ಇವರತ್ತ ಬೊಗಳಲು ಪ್ರಾರಂಭಿಸಿತು. ಸದ್ದು ಕೇಳಿ ವೈಶಾಲಿಯು ಹೆಬ್ಬಾಗಿಲಿನಿಂದ ಹೊರಬಂದಳು. ತನ್ನ ತಂದೆಯನ್ನು ಕಂಡು ಆಕೆಗೆ ಎಲ್ಲಿಲ್ಲದ ಖುಷಿ.

ಒಳಗೆ ಹೋಗಿ ಕೈಕಾಲು ತೊಳೆಯಲು ಚೊಂಬಿನಲ್ಲಿ ನೀರು ತಂದಳು. ಎಷ್ಟೊತ್ತಿಗೆ ಹೊರಟಿದ್ರಿ, ಅಮ್ಮ ಹೇಗಿದ್ದಾರೆ ಎನ್ನುತ್ತಾ ಅವರ ಕೈಯಲ್ಲಿದ್ದ ಬ್ಯಾಗುಗಳನ್ನು ತೆಗೆದುಕೊಂಡು ಒಳನಡೆದಳು. ಅದೇ ಹೊತ್ತಿಗೆ ಅವಳ ಗಂಡ ಪ್ರವೀಣ ಧನ ಹೊಡೆದುಕೊಂಡು ಬಂದ. ನೆಂಟರನ್ನು ಮಾತನಾಡಿಸಿ ಆತ ಕಾಫಿ ಕಾಯಿಸಲು ಮುಂದಾದ.

ಎಲ್ಲರೂ ಒಟ್ಟಿಗೆ ಕಾಫಿ ಕುಡಿದರು. ಮನೆಗೆಂದು ಖರೀದಿಸಿದ ಮೀನನ್ನು ಮಗಳಿಗೆ ಕೊಟ್ಟು, ಒಳ್ಳೆಯ ಕಾರದ ಮೀನ್ ಸಾರು ಮಾಡುವಂತೆ ಗೌಡರು ಹೇಳಿದರು.

ಪ್ರವೀಣನು ಗೌಡರೊಂದಿಗೆ ತೋಟದ ವಿಚಾರಗಳನ್ನು ಚರ್ಚಿಸುತ್ತ ಚೌಡಿಯಲ್ಲಿ ಕೂತಿದ್ದನು. ಅವನನ್ನು ಶಿಕಾರಿಗೆ ಕರೆಯಲು ಪಟೇಲರ ಮನೆಯ ಸ್ವರೂಪ ಬಂದಿದ್ದ.

ಮಲೆನಾಡಿನಲ್ಲಿ ಶಿಕಾರಿಗೆ ಗಂಡಸರು ಒಂದು ವಿಶೇಷ ಸಮಯವನ್ನೇ ಮೀಸಲಿಡುತ್ತಾರೆ ಎಂದರೂ ತಪ್ಪಾಗಲಾರದು. ವೈಶಾಲಿಯು ಮೀನು ಸಾರು ಮಾಡುವುದರೊಳಗೆ ನಾವಿಬ್ಬರು ಶಿಕಾರಿಗೆ ಹೋಗಿ ಬರುವೆವೆಂದು ಮಾವ ಅಳಿಯರಿಬ್ಬರೂ ಶಿಕಾರಿಗೆ ಹೊರಟರು. ಎರಡು ಟಾರ್ಚ್, ಸೀಮೆಣ್ಣೆ ದೀಪ, ಒಂದು ಕೋವಿ, ಕತ್ತಿ ಎಲ್ಲವನ್ನೂ ಹಿಡಿದು ಇಬ್ಬರೂ ಶಿಕಾರಿ ತಂಡವನ್ನು ಸೇರಿದರು.

8-10 ಜನರನ್ನು ಒಳಗೊಂಡಿದ್ದ ಶಿಕಾರಿ ತಂಡವು ಮೊದಲು ಬೈರಾಪುರದ ಗುಡ್ಡದ ಬಳಿ ಸಾಗಿತು. ಅಲ್ಲಿಂದ ಶಿಕಾರಿಯನ್ನು ಹುಡುಕಿ ಅರಮನೆ ಗುಡ್ಡದತ್ತ ಸಾಗಿದರು. ಅರಮನೆ ಗುಡ್ಡವು ಬ್ರಿಟಿಷರ ಅರ್ಧ ನಿರ್ಮಿತವಾಗಿದ್ದ ಅರಮನೆಗೆ ಪ್ರಸಿದ್ಧಿಯಾಗಿದೆ. ಅದು ಈಗ ಪಾಳು ಬಿದ್ದು ಬಾವಲಿಗಳ ಮನೆಯಾಗಿದೆ. ಅಲ್ಲಿಂದ ಮುನ್ನಡೆದು ಎಲ್ಲರೂ ಬೆಣ್ಣೆ ಹಳ್ಳದತ್ತ ಹೋದರು. ತಕ್ಷಣ ಅವರ ಕಣ್ಣಿಗೆ ಒಂದು ಸಾರಂಗದ ಮರಿಯು ನೀರು ಕುಡಿಯುತ್ತಿರುವುದು ಕಾಣಿಸಿತು. ಜನರ ಗುಂಪನ್ನು ಕಂಡು ಅದು ವೇಗವಾಗಿ ಓಡಿ ಬಿದಿರುಕಾಡನ್ನು ಸೇರಿತು.

ಅದನ್ನು ಹುಡುಕುತ್ತಾ ಹೋದ ಇವರಿಗೆ ಕಲ್ಲಿನ ಬಂಡೆಗಳ ಮೇಲೆ ರೊಟ್ಟಿ ಆಕಾರದ ವಸ್ತುಗಳು ಗೋಚರವಾದವು. ಹತ್ತಿರ ಹೋಗಿ ನೋಡಿದಾಗ ಅದು ರೊಟ್ಟಿಯಂತೆಯೇ ಕಂಡಿತು.

ಈ ಕಾಡಿನಲ್ಲಿ ಏನೋ ಯಾವುದೋ ಅಣಬೆ ಇರಬೇಕು ಎಂದು ಕೆಲವರು ಸುಮ್ಮನಾದರೂ, ಸುಬ್ಬೇಗೌಡರು ಅದರ ಬಳಿ ಹೋಗಿ ಇದು “ರೊಟ್ಟಿ ಕಲ್ಲಿನ ರೊಟ್ಟಿಗಳು” ಎಂದರು. ಅದನ್ನು ಕೇಳಿ ಎಲ್ಲರೂ ನಕ್ಕರು.

“ಕಾಡೆಮ್ಮೆಗಳು ನೀರು ಕುಡಿಯಲು ಅವುಗಳ ಮರಿಗಳ ಜೊತೆಗೆ ಇಲ್ಲಿಗೆ ಬರುತ್ತವೆ. ನಂತರ ಹೊಟ್ಟೆ ತುಂಬ ಹಾಲು ಕುಡಿದು ಮಲಗುವ ಕಾಡೆಮ್ಮೆಗಳ ಕರುಗಳ ಬಾಯಿಂದ ಚೆಲ್ಲಿದ ಹಾಲು ಈ ರೀತಿ ಬಿಸಿಲಿಗೆ ಗಟ್ಟಿಯಾಗಿ ರೊಟ್ಟಿಯಂತೆ ಕಾಣುತ್ತವೆ. ಅದಕ್ಕಾಗಿಯೇ ಈ ಜಾಗಕ್ಕೆ ರೊಟ್ಟಿಕಲ್ಲು ಎಂದು ಹೆಸರು ಬಂದಿದೆ,” ಎಂದರು.

“ನಮ್ಮ ಊರಿನ ಬಗ್ಗೆಯೇ ನಮಗೆ ತಿಳಿಯುವ ಸಂಗತಿಗಳು ಬಹಳಷ್ಟಿವೆ,” ಎನ್ನುತ್ತಾ ಎಲ್ಲರೂ ಮುನ್ನಡೆದರು.

ಇತ್ತ ಮನೆಯಲ್ಲಿ ಮೀನು ಸಾರು ತಯಾರಾಗಿದೆ. ಸಾರಿನ ಘಮ ತಡೆಯಲಾರದೆ ಸೋಮು ಹತ್ತು ಬಾರಿ ಅಡಿಗೆ ಮನೆಗೆ ಹೋಗಿ ಬಂದಾಗಿತ್ತು.

“ಅಮ್ಮಾ… ಅಪ್ಪ ಮತ್ತೆ ಅಜ್ಜ ಇನ್ನೂ ಬರ್ಲೇ ಇಲ್ಲಲಾ,” ಎನ್ನುತ್ತಾ ಸೋಮು ಬಾಗಿಲ ಬಳಿ ಹೋಗಿ ನಿಂತ.

“ಸೋಮು ಬಾ, ಊಟ ಮಾಡನಂತೆ. ಅಪ್ಪ ಮತ್ತೆ ಅಜ್ಜ ಇನ್ನೇನ್ ಬರ್ತಾರೆ,” ಎನ್ನುತ್ತಾ ತಟ್ಟೆಗೆ ಊಟ ಬಡಿಸಿದಳು.

ಮಗುವಿಗೆ ಊಟ ಮಾಡಿಸುತ್ತಾ ಅದೇ ತಟ್ಟೆಯಲ್ಲಿ ತಾನೂ ಊಟ ಮುಗಿಸಿದಳು. ನಂತರ ಬೇರೊಂದು ತಟ್ಟೆಯಲ್ಲಿ ಒಣಗಿದ ರೊಟ್ಟಿಯನ್ನು ಮೀನು ಸಾರಿನಲ್ಲಿ ನೆನೆಸಿ ನಾಯಿಮರಿಗೆ ಊಟ ಹಾಕಿದಳು. ಗಂಟೆ ರಾತ್ರಿ ಹತ್ತಾಯಿತು. ಆದರೂ ಅವರು ಇನ್ನೂ ಮನೆ ಸೇರಲಿಲ್ಲ. ಮಗುವನ್ನು ಮಲಗಿಸಲು ಹಾಸಿಗೆ ಸಿದ್ಧ ಮಾಡುತ್ತಿದ್ದಳು.

ಆಗ ಮನೆಯ ಮುಂದೆ ಅರಣ್ಯಾಧಿಕಾರಿಗಳ ಜೀಪು ಬಂದು ನಿಂತಿತು. ಇವರು ಶಿಕಾರಿಗೆ ಹೋದ ವಿಚಾರ ಗೊತ್ತಾಗಿರಬಹುದೆಂದು ಆತಂಕಗೊಂಡು ಬಾಗಿಲ ಬಳಿ ನಡೆದಳು. ಫಾರೆಸ್ಟ್ ಮ್ಯಾನ್ ಒಬ್ಬನು ಜೀಪಿನಿಂದ ಇಳಿದು, “ಅಮ್ಮಾ, ಊರಿಗೆ ನಾಲ್ಕ್ ಆನೆ ಬಂದಿವೆ. ಚೂರು ಹುಷಾರಾಗಿರಿ. ಮಕ್ಳು ಮರಿ ಎಲ್ಲಾ ಜೋಪಾನ. ಬೆಳಿಗ್ಗೆ ದನ ಕಟ್ಟಕ್ಕೆ ಹೋಗ್ಬೇಡಿ,” ಎನ್ನುತ್ತಾ ಜೀಪನ್ನು ಹತ್ತಿ ಹೋದ.

ಇದನ್ನು ಕೇಳಿ ಅವಳ ಮೈಯೆಲ್ಲಾ ನಡುಕ ಉಂಟಾಯಿತು. “ಶಿಕಾರಿಗೆ ಹೋದರು ಇನ್ನೂ ಮನೆ ಸೇರಿಲ್ಲ, ಬೇರೆ ಮಹಾರುದ್ರಾ ನಿನ್ ಪಾದವೇ ಕಾವಲು,” ಎನ್ನುತ್ತಾ ಕೈ ಮುಗಿದಳು.

ಅದೇ ಸಮಯಕ್ಕೆ ನಾಯಿ ಬೊಗಳಲು ಶುರು ಮಾಡಿತು. ಅವರು ಬಂದರೆಂದು ನೋಡಲು ಹೋದರೆ ಯಾರೂ ಕಾಣಲಿಲ್ಲ. ನಾಯಿ ಬೊಗಳುತ್ತಾ ದನದ ಕೊಟ್ಟಿಗೆಯ ಬಳಿ ಹೋಯಿತು. ಅಲ್ಲಿ ನೋಡಿದರೆ ಮನೆಯ ಹಸು ‘ಗಂಗೆ’ ಕರು ಹಾಕುವ ನೋವಿನಲ್ಲಿದೆ. ಅಮ್ಮನ ಬಳಿಗೆ ಸೋಮು ಓಡಿ ಬಂದ.

ಬಹಳಾ ನೋವಿನ ಬಳಿಕ ಗಂಗೆಯ ಮಗಳ ಜನನವಾಯಿತು. ಅದು ಹೆಣ್ಣು ಕರು. ಪುಟ್ಟ ಕರುವನ್ನು ನೋಡಿ ಸೋಮು ಬಹಳಾ ಸಂತೋಷಗೊಂಡ. ಪುಟ್ಟ ಕರುವಿಗೆ ‘ಗೌರಿ’ ಎಂದು ಹೆಸರಿಟ್ಟ.

ವೈಶಾಲಿಯು ನಾಯಿಯನ್ನು ಹಿಡಿದು ಮನೆಯ ಕಂಬಕ್ಕೆ ಕಟ್ಟಿದಳು. ನಂತರ ಒಣ ಹುಲ್ಲನ್ನು ಕೊಟ್ಟಿಗೆಗೆ ಹಾಕಿದಳು. ಹಾಗೆಯೇ ಹಸುವಿಗೆ ನೀರನ್ನು ಇರಿಸಿದಳು. ಕೊಟ್ಟಿಗೆಯ ಬಾಗಿಲನ್ನು ಭದ್ರವಾಗಿ ಮುಚ್ಚಿ ಮನೆಯೊಳಗೆ ಹೋದಳು.

ಶಿಕಾರಿಯ ತಂಡವು ಊರಿನ ಬಳಿ ಬರುವ ಹೊತ್ತಿಗೆ ತಡ ರಾತ್ರಿಯಾಗಿತ್ತು. “ಒಂದು ಕಾಡು ಕೋಳಿಯೂ ಸಿಗಲಿಲ್ಲವಲ್ಲ,” ಎನ್ನುತ್ತಾ ಹೆಜ್ಜೆ ಹಾಕುತ್ತಿದ್ದರು. ಅಷ್ಟರಲ್ಲಿ ಊರಿನ ದಾರಿಯ ಬಳಿ ಒಂದು ದೊಡ್ಡ ನೆರಳು ಕಾಣಿಸತೊಡಗಿತು. ಯಾವುದೋ ಕಾಡು ಪ್ರಾಣಿ ಓಡಿ ಬರುತ್ತಿದಂತೆ ಕಾಣುತ್ತಿತ್ತು. ತಕ್ಷಣವೇ ಕೋವಿ ಸಿದ್ಧ ಮಾಡಿದರು. “ಒಂದು ಕೋವಿಯ ಗುಂಡಾದರೂ ಖರ್ಚಾಗ್ಲಿ,” ಎನ್ನುತ್ತ ಪ್ರವೀಣ ಗುಂಡು ಹಾರಿಸಿದ.

ಗುರಿ ಸರಿಯಾಗಿ ತಲುಪಿತು. ಹತ್ತಿರ ಹೋಗಿ ನೋಡಿದರೆ ಅದೊಂದು ಗುಳ್ಳೆಯ ನರಿ. ಅದರ ಬಾಯಲ್ಲಿ ಒಂದು ದೊಡ್ಡ ಕೋಳಿ ಹ್ಯಾಟೆ ಮತ್ತು ಒಂದು ಸಣ್ಣ ಕೋಳಿ ಪಿಳ್ಳೆಯಿತ್ತು. “ಅಯ್ಯೋ, ಇದ್ರ ಮನೆ ಹಾಳಾಗ,” ಎನ್ನುತ್ತಾ ಅದರ ದೇಹವನ್ನು ರಸ್ತೆ ಬದಿಯ ಕಾಫಿ ತೋಟದ ಗುಂಡಿಗೆ ಜಾರಿಸಿದರು. ಎಲ್ಲರೂ ತಮ್ಮ ತಮ್ಮ ಮನೆಯ ದಾರಿ ಹಿಡಿದರು.

ಗುಂಪಿನಲ್ಲಿದ್ದ ಕೆಲವರು ನರಿಯ ಬಾಯಿಯಲ್ಲಿದ್ದ ಕೋಳಿಯ ಮಾಂಸವನ್ನು ಹಂಚಿಕೊಳ್ಳೋಣ, ಶಿಕಾರಿಗೆ ಹೋಗಿ ಬರಿ ಕೈಲಿ ಹೋದ್ರೆ ಸರಿ ಆಗಲ್ಲ ಎಂದರು. ಆಗ ಪ್ರವೀಣ ಮರದ ಕೋಲಿನಲ್ಲಿ ಕೋಳಿಯನ್ನು ಎತ್ತಿಹಿಡಿದು ನಾಳೆ ಕೋಳಿ ಮಾಂಸವನ್ನು ಹಂಚಿಕೊಳ್ಳುವುದಾಗಿ ಹೇಳಿ ಸುಬ್ಬೇಗೌಡರೊಂದಿಗೆ ಮನೆಯ ದಾರಿಯಲ್ಲಿ ನಡೆಯತೊಡಗಿದ.

ಗುಂಡು ಹಾರಿದ ಶಬ್ದವನ್ನು ಕೇಳಿ ಹೆದರಿದ ಸೋಮು ಅಮ್ಮನನ್ನು ತಬ್ಬಿ ಹಿಡಿದು ಅಳತೊಡಗಿದ. ವೈಶಾಲಿಯು ಸೋಮನನ್ನು ಸಮಾಧಾನಪಡಿಸಿ ತಟ್ಟಿ ಮಲಗಿಸಿದಳು.

ಮನೆಯ ಅಂಗಳದ ಬಳಿ ಬರೀ ಕೋಳಿಯ ಪುಕ್ಕಗಳು. ಅದನ್ನು ನೋಡಿ ನರಿ ಬಂದದ್ದು ತಮ್ಮ ಮನೆಗೆಯೇ ಎಂದು ಅವರಿಗೆ ಅರಿವಾಯಿತು. ನಾಯಿಯನ್ನು ಕಂಬಕ್ಕೆ ಕಟ್ಟಿರುವುದನ್ನು ನೋಡಿ “ನಾಯಿ ಕಟ್ಟಿರ್ಲಿಲ್ಲ ಅಂದಿದ್ರೆ ನಮ್ಮನೆ ಕೋಳಿ ಜೀವ ಉಳಿಯದು,” ಎನ್ನುತ್ತಾ ನಾಯಿಯನ್ನು ಬಿಚ್ಚಿ ಓಡಿಸಿದ. ನಂತರ ನಿಧಾನಕ್ಕೆ ಮನೆಯ ಬೀಗ ತೆಗೆದು ಮಾವ ಅಳಿಯರಿಬ್ಬರೂ ಮನೆಯೊಳಗೆ ಹೋದರು. ಇಬ್ಬರೂ ಚೂರು ರಾಗಿ ಅಂಬಲಿ ಕುಡಿದು ಮಲಗಿದರು.

ಬೆಳಗ್ಗೆ ಎದ್ದು ವೈಶಾಲಿ ನೋಡಿದರೆ ಅಂಗಳವೆಲ್ಲಾ ಕೋಳಿಯ ಪುಕ್ಕ ಮತ್ತು ರಕ್ತ. ಅಷ್ಟರಲ್ಲಿ ಪ್ರವೀಣನು ನಡೆದ ಘಟನೆಯನೆಲ್ಲ ಹೇಳಿದ. ವೈಶಾಲಿಯು, “ನರಿ ಸಾಯ್ಸಿ ಒಳ್ಳೇದ್ ಮಾಡಿದ್ರಿ. ಜನ ಹೇಳ್ತಿದ್ರು ಅದು ಹುಚ್ಚು ಗುಳ್ಳೆ ನರಿಯಂತೆ,” ಎಂದಳು. ಹಾಗೆಯೇ ಆನೆ ಬಂದಿರುವುದರ ಬಗ್ಗೆಯೂ ಗಂಡನಿಗೆ ಹೇಳಿದಳು ಮತ್ತು ಹಸು ಕರು ಹಾಕಿರುವುದರ ಬಗ್ಗೆಯೂ ಹೇಳಿದಳು.

ಅದೇ ಸಮಯಕ್ಕೆ ಸುಬ್ಬೇಗೌಡರು ಅಂಗಳಕ್ಕೆ ಬಂದರು. ಅವರಿಗೆ ಕಾಫಿ ಕಾಯಿಸಲು ಹಾಲು ಕರೆದು ಬರುವೆನೆಂದು ವೈಶಾಲಿ ಕೊಟ್ಟಿಗೆಗೆ ಹೋದಳು.

ಸೋಮು ಅಮ್ಮನ ಹಿಂದೆಯೇ ಕೊಟ್ಟಿಗೆಗೆ ಹೋದನು. ಪುಟ್ಟ ಕರುವನ್ನು ನೋಡುವುದೇ ಅವನಿಗೆ ಖುಷಿ. ಅದನ್ನು ಗೌರಿ ಗೌರಿ ಎಂದು ಕರೆದು ಖುಷಿಪಟ್ಟನು. ಮನೆ ಅಂಗಳದ ಬಳಿ ಹೋಗಿ ನಾಯಿಮರಿಯನ್ನು ಹುಡುಕಿದನು. ಎಲ್ಲೂ ಕಾಣಿಸಲಿಲ್ಲ.

“ಅಪ್ಪ, ನಾಯಿ ಮರಿ ಕಾಣ್ತಾ ಇಲ್ಲ,” ಎಂದು ಸೋಮು ಕೂಗಿದ.

ನಾಯಿಮರಿಯನ್ನು ಹುಡುಕಿಕೊಂಡು ಪ್ರವೀಣ ತೋಟದ ಬಳಿ ಹೋದಾಗ ನೋಡಿದರೆ ನರಿಯ ಬಳಿಯೇ ನಾಯಿಮರಿಯು ತೀರಿಹೋಗಿದೆ. ನರಿಯ ಬಾಯಿಯ ವಿಷದ ಜೊಲ್ಲು ನಾಯಿಗೆ ತಾಗಿ ಹೀಗಾಗಿದೆ ಎಂದು ತಕ್ಷಣ ಆತನಿಗೆ ತಿಳಿಯಿತು. ತಾನು ಸಾಕಿದ ಪ್ರೀತಿಯ ನಾಯಿಮರಿ ತನ್ನಿಂದಲೇ ತೀರಿಹೋಯಿತೆಂದು ಬಹಳಾ ಬೇಸರಗೊಂಡ. ಜೋಪಾನವಾಗಿ ಅದರ ಅಂತ್ಯಸಂಸ್ಕಾರ ಮಾಡಿ ಮುಗಿಸಿದ.

ಕಣ್ಣೀರು ಒರೆಸಿಕೊಂಡು ಮನೆಗೆ ಹೋದಾಗ ಸೋಮು ಅಪ್ಪ ಬರುವುದನ್ನೇ ಕಾಯುತ್ತಾ ನಿಂತಿದ್ದ. “ಅಪ್ಪ, ನಮ್ ಬಿಳಿಯ ಎಲ್ಲಿ… ಸಿಕ್ಲಿಲ್ವಾ?” ಎಂದನು.

ಆಗ ಪ್ರವೀಣ ಗಟ್ಟಿ ಮನಸು ಮಾಡಿ, “ನಮ್ ಮನೆ ನಾಯಿ ಮರಿ ಧೈರ್ಯ ನೋಡಿ ಫಾರೆಸ್ಟ್ ಆಫೀಸರ್ ಅದನ್ನು ಇಲಾಖೆಗೆ ಕೊಡಿ ಅಂತ ಕೇಳಿದ್ರು. ಇದು ನಮ್ ಮನೆ ನಾಯಿಮರಿಗೆ ಒಂಥರ ಗವರ್ನಮೆಂಟ್ ಕೆಲ್ಸ ಇದ್ದಂಗೆ. ಅದಕ್ಕೆ ನಾಯಿಮರಿನ ಅವರೆಲ್ಲಾ ಜೀಪಲ್ಲಿ ಕೊಡಗಿಗೆ ಕರ್ಕೊಂಡು ಹೋದ್ರು. ಬಿಡು, ನಮ್ ಮನೆ ನಾಯಿ ಎಲ್ಲಿದ್ರೂ ಚೆನ್ನಾಗಿರ್ಲಿ ಅಂತ ನಾನು ಸುಮ್ನಾದೆ,” ಎಂದನು.

ಇದನ್ನು ಕೇಳಿ ಸೋಮು ಒಂದೇ ಸಮನೆ ಅತ್ತನು.

ಅಷ್ಟರಲ್ಲಿ ಸುಬ್ಬೇಗೌಡರು ಮಗಳಿಗೆ, ಅಳಿಯನಿಗೆ ಹೇಳಿ ಹೊರಟರು. ಸೋಮುವಿಗೆ ನೂರು ರೂಪಾಯಿ ಕೊಟ್ಟರು.

ದೂರಲ್ಲಿ ಜೀಪು ಬರುತ್ತಿತ್ತು. ಅದೇ ಸಮಯಕ್ಕೆ ರಸ್ತೆಯಲ್ಲಿ ಮೂರು ದೊಡ್ಡ ನಾಯಿಗಳು ಮತ್ತು ಮೂರು ಚಿಕ್ಕ ನಾಯಿಮರಿಗಳ ಗಲಾಟೆ ನಡೆಯುತ್ತಿತ್ತು. ಸೋಮು ಓಡಿ ಹೋಗಿ ಅವುಗಳ ಹತ್ತಿರ ಹಾಲಿನ ಪಾತ್ರೆಯನ್ನು ಇಟ್ಟನು. ನಾಯಿ ಗಲಾಟೆಯು ತಣ್ಣಗಾಗಿ ಅವುಗಳ ಗಮನ ಹಾಲಿನ ಪಾತ್ರೆಯ ಕಡೆಗೆ ಜಾರಿತು. ಅವುಗಳೆಲ್ಲವೂ ಸೋಮುವಿನ ಹಿಂದೆ ಬಾಲ ಅಲ್ಲಾಡಿಸುತ್ತ ತೆರಳಿದವು.

“ಅಪ್ಪ, ಇವೆಲ್ಲವನ್ನೂ ನಾವೇ ಸಾಕೋಣ,” ಎಂದು ಸೋಮು ಹೇಳಿದಾಗ ಪ್ರವೀಣ ಇಲ್ಲ ಎನ್ನಲಾಗಲಿಲ್ಲ.

ಸುಬ್ಬೇಗೌಡರು ಜೀಪು ಹತ್ತಿ, “ಸೋಮು, ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ?” ಎಂದರು.

ಆಗ ಸೋಮು “ನಾನು ನಾಯಿಗಳಿಗೆ ಡಾಕ್ಟರ್ ಆಗ್ತೀನಿ,” ಎಂದು ಕಿರುಚಿ ಹೇಳಿದಾಗ ಪ್ರವೀಣ ಮತ್ತು ವೈಶಾಲಿ ಇಬ್ಬರೂ ಮುಗುಳ್ನಕ್ಕರು.

Join the Discussion